ಗಣಿತ ಕಿರಿಕಿರಿಯ ವಿಷಯವಲ್ಲ - ಸುಂದರೇಶ್.ವೈ.ಬಿ., ಕ್ಷೇತ್ರಶಿಕ್ಷಣಾಧಿಕಾರಿಗಳು, ಬೇಲೂರು, ಹಾಸನ ಜಿಲ್ಲೆ


   ಯಾವುದೇ ಒಬ್ಬ ವ್ಯಕ್ತಿಗೆ ತನ್ನ ಶಾಲಾ ದಿನಗಳಲ್ಲಿ ಕಲಿತ ವಿಷಯಗಳ ಬಗ್ಗೆ ನೆನಪಾದಾಗ ಥಟ್ ಅಂತ ತಲೆಗೆ ಹೊಳೆಯುವ ಕೆಲ ವಿಷಯಗಳಲ್ಲಿ ಗಣಿತವು ಉನ್ನತ ಸ್ಥಾನದಲ್ಲಿರುತ್ತದೆ. ಹಲವರಿಗೆ ಶಾಲಾ ದಿನಗಳಿಂದಲೂ ಗಣಿತ ಎಂದರೆ ಸ್ವಲ್ಪ ಕಿರಿಕಿರಿಯ
ವಿಷಯವೆ. ಇದಕ್ಕೆ ಹಲವಾರು ಕಾರಣಗಳಿವೆ. ನಮ್ಮ ಶಾಲಾ ಪಠ್ಯಕ್ರಮ ಅಥವಾ ಬೋಧನಾ ಕ್ರಮ ಅಥವಾ ಇನ್ನೇನೋ ಕಾರಣಗಳಿರಬಹುದು. ಕಾರಣಗಳು ಏನೇ ಇರಲಿ ಗಣಿತ ಎಂಬ ಪದ ಕೇಳುತ್ತಿದ್ದಂತೆ ಭಯ, ಆತಂಕ, ಗಾಬರಿ ಎಲ್ಲಾ ಶುರುವಿಟ್ಟುಕೊಳ್ಳುತ್ತದೆ. ಇವತ್ತಿನ ವಿದ್ಯಾರ್ಥಿಗಳಿಗೆ ಇದು ಕಾಡುತ್ತಿರುವ ಸಮಸ್ಯೆಯೂ ಹೌದು. ಈ ಸಮಸ್ಯೆಗೆ ಪರಿಹಾರ ಹುಡುಕುವ ಜವಾಬ್ದಾರಿ ಪಾಠ ಮಾಡುವ ಗುರುಗಳ ಮೇಲೆ ಎಷ್ಟು ಇದೆಯೋ ಅಷ್ಟೇ ಜವಾಬ್ದಾರಿ ಪೋಷಕರ ಮೇಲೆ, ಶಾಲಾ ಆಡಳಿತ ವರ್ಗದ ಮೇಲೆ, ವಿದ್ಯಾರ್ಥಿ ವರ್ಗದ ಮೇಲೆಯೂ ಇದೆ.
      ಶಿಕ್ಷಕರು ಗಣಿತವನ್ನು ಕಲಿಸಲು ಇಂದು ಸಾಂಪ್ರದಾಯಿಕ ಬೋಧನೆಯಿಂದ ಹೊರತಾಗಿ ಇತರೇ ಲಭ್ಯವಿರುವ ನೂತನ ಬೋಧನಾ ಪಧ್ಧತಿಗಳನ್ನು ಅನುಸರಿಸುವ ಅನಿವಾರ್ಯತೆ ಖಂಡಿತಾ ಇದೆ. ಇಂದಿನ ದಿನಮಾನಗಳಲ್ಲಿ ಅಂತರ್ಜಾಲ ಬಳಸಿ ಕಲಿಕೆಯನ್ನು ಸರಳವಾಗಿಸುವ ಮಾರ್ಗಗಳನ್ನು ಶಿಕ್ಷಕರಾದವರು ಬಳಸಬೇಕಾಗಿದೆ. ಅದೇ ರೀತಿ ವಿದ್ಯಾರ್ಥಿಗಳಾದವರೂ ಸಹ ಗಣಿತವನ್ನು ಒಲಿಸಿಕೊಳ್ಳಲು ಸತತವಾಗಿ ಪ್ರಯತ್ನಿಸುತ್ತಿರಬೇಕಾಗಿರುತ್ತದೆ. ಗಣಿತ ಎಂದ ಕೂಡಲೇ ಪರೀಕ್ಷೆಗಳಿಗೆ, ಮಾರ್ಕ್ಸ್ ಕಾರ್ಡುಗಳಿಗೆ, ಗ್ರೇಡ್‌ಗಳಿಗೆ ಸೀಮಿತವಾಗಿಲ್ಲ. ನಮ್ಮ ದೈನಂದಿನ ಜೀವನದಲ್ಲಿ ಹಲವಾರು ಸಂದರ್ಭಗಳಲ್ಲಿ ಗಣಿತದ ನೆರವು ಬೇಕಾಗುತ್ತದೆ. ಅಷ್ಟೇ ಅಲ್ಲ ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂಗೋಳ, ಜೀವಶಾಸ್ತ್ರ, ಎಂಜಿನಿಯರಿಂಗ್ ಶಾಖೆಗಳು, ವೈದ್ಯಕೀಯ ಶಾಖೆಗಳು, ಇನ್ನಿತರ ಎಲ್ಲಾ ವಿಜ್ಞಾನದ ಶಾಖೆಗಳು, ಇತರೆ ವಿಷಯಗಳೂ ಸಹ ಗಣಿತದ ಮೇಲೆ ಅವಲಂಬಿಸಿರುತ್ತದೆ. ಹೀಗೆ ಗಣಿತದ ರೂಪಗಳು, ಶಾಖೆಗಳು, ಉಪಶಾಖೆಗಳು ಬೇರೆ ಬೇರೆ ಇರಬಹುದು. ಆದರೆ ಗಣಿತ ಇಲ್ಲದೇ ಇರುವುದು ಅಸಾಧ್ಯವೇ ಸರಿ. ಆದ್ದರಿಂದ ಗಣಿತವನ್ನು ಪ್ರಕೃತಿಯ ಭಾಷೆ ಎಂದು ಕರೆಯುತ್ತಾರೆ. ಹೀಗೆ ನಮ್ಮ ಜೀವನದಲ್ಲಿ ಪ್ರತಿ ಹೆಜ್ಜೆಯಲ್ಲಿ ಬೆರೆತಿರುವ ಗಣಿತವನ್ನು ದೂರ ಮಾಡದೇ ಹೆಚ್ಚಿನ ಶ್ರಧ್ಧೆ ಹಾಗೂ ಪರಿಶ್ರಮಗಳಿಂದ ಗಣಿತವನ್ನು ಕರಗತ ಮಾಡಿಕೊಳ್ಳಬಹುದಾಗಿದೆ.

         ಇಂತಹ ಪ್ರಮುಖ ವಿಷಯವಾದ ಗಣಿತದ ಬಗ್ಗೆ ಎಲ್ಲರಲ್ಲಿ ಆಸಕ್ತಿ ಹುಟ್ಟಿಸುವ, ಗಣಿತ ವಿಚಾರಗಳನ್ನು ಹಂಚಿಕೊಳ್ಳುವ ಧ್ಯೇಯದೊಂದಿಗೆ ಹೆಜ್ಜೆ ಇಡಲು ಮುಂದಾಗಿರುವ 'ಅನಂತದೆಡೆಗೆ...' ಗಣಿತ ಪತ್ರಿಕೆಯ ಆಶಯ ಅಭಿನಂದನಾರ್ಹವಾದುದು. ಈ ಗಣಿತ ಪತ್ರಿಕೆಯ ಮುಂದಿನ ಹೆಜ್ಜೆಗಳು ದೃಢವಾಗಿರಲಿ. ಈ ಪತ್ರಿಕೆಯು ಎಲ್ಲಾ ಗಣಿತ ಜ್ಞಾನದಾಹಿಗಳಿಗೆ ಎಂದೆಂದೂ ಜ್ಞಾನ ನೀಗಿಸುವ ಉತ್ತಮ ಪತ್ರಿಕೆ ಆಗಿರಲಿ. ಈ ಶುಭ ಸಂದರ್ಭದಲ್ಲಿ 'ಅನಂತದೆಡೆಗೆ...' ಗಣಿತ ಪತ್ರಿಕೆಯ ಪ್ರಯೋಜನ ಎಲ್ಲರಿಗೂ ಸಿಗುವಂತಾಗಲಿ ಹಾಗೂ ಈ ಗಣಿತ ಪತ್ರಿಕೆಗೆ  ಶುಭವಾಗಲಿ ಎಂದು ಮನಸಾರೆ ಹಾರೈಸುತ್ತೇನೆ.


(ಪೋಟೋ ಕೃಪೆ : ಅಂತರ್ಜಾಲ)