1. ಗಣಿತದ ಬಗ್ಗೆ ಇರುವ ನಕಾರಾತ್ಮಕ ಧೋರಣೆ ಬಿಡಿ.
ಗಣಿತ ಕಷ್ಟ ಅಲ್ಲ. ನೀವು ಗಣಿತ ಮೂಲ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಎಡವಿದರೆ ಗಣಿತ ಕಷ್ಟ ಎನಿಸುತ್ತದೆ ವಿನಃ, ಅದನ್ನು ಕರಗತ ಮಾಡಿಕೊಂಡವರಿಗೆ ಸುಲಿದ ಬಾಳೆಹಣ್ಣು.
2. ಹೆಚ್ಚು ಪ್ರಶ್ನೆ ಕೇಳಿ.
ಇದು ಗಣಿತ ಹಾಗೂ ವಿಜ್ಞಾನವನ್ನು ಅರ್ಥೈಸಿಕೊಳ್ಳುವ ಮಾರ್ಗ. ನಿಮಗೆ ಬಂದ ಅನುಮಾನ ಎಷ್ಟೇ ಚಿಕ್ಕದಾದರೂ ಅಲಕ್ಷ್ಯ ಮಾಡಬೇಡಿ. ಸಂಕೋಚ ಬಿಟ್ಟು ನಿಮ್ಮ ಶಿಕ್ಷಕರಿಗೆ ಪ್ರಶ್ನೆ ಕೇಳಿ. ನೆನಪಿಡಿ ಪ್ರಶ್ನೆ ಕೇಳುವ ವಿದ್ಯಾರ್ಥಿಗಳನ್ನು ಶಿಕ್ಷಕರೆಲ್ಲರೂ ತುಂಬಾ ಪ್ರೀತಿಸುತ್ತಾರೆ.
3. ಸತತ ಅಭ್ಯಾಸ ಮಾಡಿ.
ತರಗತಿಯಲ್ಲಿ ಹೇಳಿಕೊಟ್ಟ ಲೆಕ್ಕಗಳನ್ನು ಬಿಡುವಿನ ಸಮಯದಲ್ಲಿ ಅಭ್ಯಾಸ ಮಾಡುತ್ತಿರಿ. ಹೋಂವರ್ಕ್ ಕೊಟ್ಟಿಲ್ಲದ ದಿನ ನೀವೇ ಸ್ವಯಂ ಪ್ರೇರಿತವಾಗಿ ಅಭ್ಯಾಸ ಮಾಡಿ. 'ಗಣಿತ ಸಾಧಕನ ಸೊತ್ತೇ ಹೊರತು ಸೋಮಾರಿಯದ್ದಲ್ಲ'. ನೀವು ಸಾಧಕರ ಗುಂಪಿನಲ್ಲಿರಿ.
4. ಗಣಿತವನ್ನು ಎಂದೂ ಕಂಠಪಾಠ ಮಾಡದಿರಿ.
ಗಣಿತ ಲೆಕ್ಕಗಳು ಬಿಡಿಸುವ ವಿಧಾನ ಒಂದೇಯಾದರೂ ಲೆಕ್ಕಗಳು ವಿಭಿನ್ನವಾಗಿರುತ್ತವೆ. ಅದಕ್ಕೆ ಸಂಬಂಧಿಸಿದ ಸೂತ್ರ/ಸಮೀಕರಣ/ಸಂಬಂಧಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಿ. ಬೇರೆ ವಿಷಯದಂತೆ ಇದನ್ನು ಕಂಠಪಾಠ ಮಾಡಿ ಒಪ್ಪಿಸಲಾಗದು.
5. ಯಾವಾಗ ಅರ್ಥವಾಗಲಿಲ್ಲವೋ ಆಗಲೇ ಕೇಳಿ ಅರ್ಥಮಾಡಿಕೊಳ್ಳಿ.
ತರಗತಿಯಲ್ಲಿ ಶಿಕ್ಷಕರು ಲೆಕ್ಕಗಳನ್ನು ಬಿಡಿಸುವಾಗ ನಿಮಗೆ ಯಾವ ಹಂತದಲ್ಲಿ ಅರ್ಥವಾಗಲಿಲ್ಲವೋ ಅದನ್ನು ಆಗಲೇ ಕೇಳಿ. ಶಿಕ್ಷಕರು ಆಗಲೇ ಹೇಳಿಕೊಡಬಹುದು, ಇಲ್ಲ ಪೂರ್ಣ ಲೆಕ್ಕ ಬಿಡಿಸಿದ ನಂತರ ಹೇಳಿಕೊಡಬಹುದು ಅಥವಾ ನಿಮಗೆ ಬೇರೆ ಸಮಯದಲ್ಲಿ ಹೇಳಿಕಡಬಹುದು. ಅವರು ಯಾವಾಗಲೇ ಹೇಳಿಕೊಡಲಿ ಲೆಕ್ಕ ಬಿಡಿಸುವುದನ್ನು ನೀವು ಕಲಿಯಬೇಕೆಂಬ ಛಲ ನಿಮ್ಮಲ್ಲಿರಲಿ. ಅರ್ಥವಾಗುವ ತನಕ ಕೇಳುತ್ತಲೇ ಇರಿ.
6. ಗಣಿತ ಪಠ್ಯವನ್ನು ಓದಿ.
ತರಗತಿಯಲ್ಲಿ ಶಿಕ್ಷಕರು ಬಿಡಿಸಿದ ಲೆಕ್ಕಗಳು ಹಾಗೂ ಹೋಂವರ್ಕ್ ಲೆಕ್ಕಗಳನ್ನಷ್ಟೇ ಕಲಿತರೆ ಸಾಲದು. ಗಣಿತ ಪಠ್ಯಪುಸ್ತಕವನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರಲ್ಲಿರುವ ಉದಾಹರಣೆ ಲೆಕ್ಕಗಳನ್ನು ಗಮನಿಸಿ ಅಭ್ಯಾಸದ ಲೆಕ್ಕಗಳನ್ನು ನೀವೇ ಬಿಡಿಸಲು ಪ್ರಯತ್ನಿಸಿ. ಬಿಡಿಸಲಾಗದ ಲೆಕ್ಕಗಳಿದ್ದರೆ ನಿಮ್ಮ ಶಿಕ್ಷಕರ ಸಹಾಯ ಪಡೆದುಕೊಳ್ಳಿ.
7. ನಿಮ್ಮದೇ ಆದ ಶೈಲಿಯಲ್ಲಿ ಗಣಿತವನ್ನು ಅಭ್ಯಾಸ ಮಾಡಿ.
ಗಣಿತವನ್ನು ಕೇವಲ ಓದಲಿಕ್ಕಾಗುವುದಿಲ್ಲ, ಅದನ್ನು ಬರೆದು ಅಭ್ಯಾಸ ಮಾಡಬೇಕು. ಈ ಅಭ್ಯಾಸವನ್ನು ಸ್ವತಃ ನೀವೇ ರೂಢಿಸಿಕೊಳ್ಳಬೇಕು. ಸತತ ಅಭ್ಯಾಸದಿಂದ ನಿಮ್ಮದೇ ಆದ ಶೈಲಿ ಬರುತ್ತದೆ. ಪ್ರಯತ್ನ ಮಾತ್ರ ಬಿಡಬೇಡಿ.
8. ಗಣಿತ ಓದುವಾಗ ನಿಮ್ಮ ಮನಸ್ಸು ಪ್ರಶಾಂತವಾಗಿರಲಿ.
ಗಣಿತವನ್ನು ಅಭ್ಯಾಸ ಮಾಡುವಾಗ ನಿಮ್ಮ ಮನಸ್ಥಿತಿ ಬಹಳ ಮುಖ್ಯವಾಗಿರುತ್ತದೆ. ಪ್ರಸನ್ನತೆಯಿಂದ ಕುಳಿತು ಅಭ್ಯಾಸ ಮಾಡಬೇಕು. ಉಳಿದ ವಿಷಯಗಳಂತೆ ಗಣಿತ ವಿಷಯವಲ್ಲ, ನಿಮ್ಮ ಮನಸ್ಸು ಅತ್ತಿತ್ತ ಹೋಗದಂತೆ ನೋಡಿಕೊಳ್ಳಿ. ಇದರಿಂದ ಏಕಾಗ್ರತೆ ಹೆಚ್ಚಾಗಿ ಬಹಳ ಬೇಗ ಲೆಕ್ಕಗಳು ನಿಮ್ಮ ಹಿಡಿತಕ್ಕೆ ಸಿಕ್ಕುತ್ತವೆ.
9. ಗಣಿತವನ್ನೇ ಚಿಂತಿಸಿ, ಗಣಿತವನ್ನೇ ಮಾತಾಡಿ.
ಗಣಿತವನ್ನು ಕಲಿಯುವುದು ಧ್ಯಾನ ಮಾಡಿದಂತೆ. ಗಣಿತ ಹೆಚ್ಚು ಹತ್ತಿರವಾಗಬೇಕೆಂದರೆ ಗಣಿತದ ಬಗ್ಗೆ ನಿಮ್ಮ ಸ್ನೇಹಿತರೊಡನೆ ಮಾತನಾಡಿ. ಗಣಿತ ಶಿಕ್ಷಕರೊಡನೆ ಹೆಚ್ಚು ಹೆಚ್ಚು ಸಂಭಾಷಿಸಿದರೆ ಗಣಿತದ ಹೊಸ ಹೊಸ ಚಿಂತನೆಗಳು ನಿಮಗೆ ದಕ್ಕುತ್ತವೆ.
ನೆನಪಿಡಿ: ಗಣಿತ ಶಿಕ್ಷಕರನ್ನು ಇತರ ಶಿಕ್ಷಕರಂತೆ ಪ್ರೀತ್ಯಾದಾರದಿಂದ ಮಾತಾಡಿಸಿ, ಅವರ ಒಡನಾಟಕ್ಕೆ ನೀವು ಸಿಕ್ಕಿದರೆ ನಿಮ್ಮ ಭವಿಷ್ಯ ಉಜ್ವಲವಾಗುವುದು.
ನಿಮ್ಮ ಸಫಲತೆ ಅಥವಾ ವಿಫಲತೆ ನಿಂತಿರುವುದು ಗಣಿತ ವಿಷಯದಲ್ಲಿ. ಅಂಜದೆ ಮುನ್ನುಗ್ಗಿ ಮನಸ್ಸಿದ್ದರೆ ಮಾರ್ಗ ತಾನಾಗೇ ತೆರದುಕೊಳ್ಳುತ್ತದೆ.
(ಫೋಟೋ
ಕೃಪೆ: ಅಂತರ್ಜಾಲ)